ದಂಡಾಧಿಕಾರಿ -
ಸರ್ಕಾರದ ನ್ಯಾಯಿಕ. ವಿಧಾಯಕ ಅಥವಾ ಕಾರ್ಯಪಾಲಕ ಕರ್ತವ್ಯಗಳನ್ನು ನಿರ್ವಹಿಸಲು ನೇಮಕವಾದ ಸರ್ಕಾರಿ ಅಧಿಕಾರಿ (ಮ್ಯಾಜಿಸ್ಟ್ರೇಟ್). ಸಾಮಾನ್ಯ ನ್ಯಾಯವನ್ನು ಅನುಸರಿಸುವ ದೇಶಗಳಲ್ಲಿ - ಸಾಮಾನ್ಯವಾಗಿ ರೂಢಿಯಲ್ಲಿರುವ ಸೀಮಿತ ಅರ್ಥದಲ್ಲಿ - ಶಾಂತಿ ನ್ಯಾಯಾಧಿಪತಿಗಳು, ಅಧಿಪತ್ರಗಳನ್ನು (ವಾರೆಂಟ್) ಹೊರಡಿಸಲು ಅಧಿಕಾರ ಪಡೆದಿರುವ ಅಧಿಕಾರಿಗಳು ಮುಂತಾದ ಕೆಲವು ನ್ಯಾಯಾಧಿಕಾರಿಗಳನ್ನು ದಂಡಾಧಿಕಾರಿಗಳೆಂದು ಕರೆಯುವುದುಂಟು. ಷರಾ ಅಧಿಕಾರಿ (ನೋಟರಿ ಪಬ್ಲಿಕ್), ಪತ್ರಾಯುಕ್ತ (ಕಮಿಷನರ್ ಆಫ್ ಡೀಡ್ಸ್) ಮುಂತಾದ ಅರ್ಧನ್ಯಾಯಿಕ ಅಧಿಕಾರಿಗಳನ್ನೂ ಈ ಹೆಸರಿನಿಂದ ಕರೆಯುತ್ತಾರೆ. ಭಾರತದ 1973ರ ದಂಡ ಪ್ರಕ್ರಿಯಾ ಸಂಹಿತೆಯ ಹನ್ನೊಂದನೆಯ ಕಲಮಿನ ಅಡಿಯಲ್ಲಿ ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚನೆಯ ಅನಂತರ ಪ್ರಥಮ ಮತ್ತು ದ್ವಿತೀಯ ದರ್ಜೆಯ ದಂಡಾಧಿಕಾರಿ ನ್ಯಾಯಾಲಯಗಳನ್ನು ನಿಯೋಜಿತ ಸ್ಥಳಗಳಲ್ಲಿ ನೇಮಿಸುತ್ತದೆ. ಆ ನ್ಯಾಯಾಲಯಗಳಲ್ಲಿ ಅಗ್ರಾಸನ ವಹಿಸಿ ಕೆಲಸ ನಿರ್ವಹಿಸಲು ನ್ಯಾಯಿಕ ದಂಢಾಧಿಕಾರಿಗಳನ್ನು ರಾಜ್ಯದ ನ್ಯಾಯಾಂಗದಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗದಿಂದ ಉಚ್ಚ ನ್ಯಾಯಾಲಯ ನೇಮಿಸುತ್ತದೆ. ದಂಡಾಧಿಕಾರಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ದರ್ಜೆಗಳಿರುತ್ತವೆ. ವಿಶೇಷ ರೀತಿಯ ಮೊಕದ್ದಮೆಗಳಿದ್ದರೆ ಅವುಗಳ ತೀರ್ಮಾನಕ್ಕೆಂದು ಶ್ರೇಷ್ಠ ನ್ಯಾಯಾಲಯ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಬಹುದು.

ಯಾರಾದರೂ ವ್ಯಕ್ತಿ ಯಾವುದಾದರೂ ಅಪರಾಧವನ್ನು ಮಾಡಿದ್ದಾನೆಂದು ಆಪಾದನೆ ಇದ್ದಾಗ ಅಧಿಕಾರ ಪೋಲೀಸರಾಗಲಿ ಇತರರು ಯಾರಾಗಲಿ ಅಂಥ ಆಪಾದಿತನನ್ನು ದಂಡಾಧಿಕಾರಿಯ ಮುಂದೆ ಹಾಜರುಪಡಿಸುತ್ತಾರೆ. ಆಪಾದಿತ ನಿಜವಾಗಿಯೂ ದೋಷಿಯೋ ಇಲ್ಲವೋ ಎಂದು ನಿರ್ಧರಿಸಲು ದಂಡಾಧಿಕಾರಿಯೇ ಶಕ್ತ. ಆಪಾದಿತನ ದೋಷ ರುಜುವಾತಾದರೆ ದಂಡಾಧಿಕಾರಿ ಅಂಥವನು ದೋಷಿಯೆಂದು ಸಾರಿ ಲಿಖಿತ ರೂಪದ ತೀರ್ಪನ್ನು ಕೊಡುತ್ತಾನೆ. ದೋಷಿಯಾದ ವ್ಯಕ್ತಿಗೆ ಅವನು ಮಾಡಿದ ಅಪರಾಧಕ್ಕೆ ಅನುಗುಣವಾದ ಶಿಕ್ಷೆಯನ್ನು ವಿಧಿಸುತ್ತಾನೆ. ಪ್ರಥಮ ದರ್ಜೆ ದಂಡಾಧಿಕಾರಿ ಮೂರು ವರ್ಷಗಳಿಗೆ ಒಳಪಟ್ಟು ಕಾರಾವಾಸ ಅಥವಾ ರೂ. 5,000ಕ್ಕೆ ಮೀರದ ದಂಡದ ಶಿಕ್ಷೆ ವಿಧಿಸಬಹುದು. ಅಂತೆಯೇ, ದ್ವಿತೀಯ ದರ್ಜೆಯ ದಂಡಾಧಿಕಾರಿ ಒಂದು ವರ್ಷಕ್ಕಿಂತ ಮೀರದಂತೆ ಕಾರಾಗೃಹ ವಾಸ ಅಥವಾ ರೂ. 1,000ಕ್ಕಿಂತ ಹೆಚ್ಚಿಲ್ಲದಂತೆ ವಿಧಿಸಲು ಅಧಿಕಾರ ಹೊಂದಿರುತ್ತಾನೆ.
1973 ರ ದಂಡ ಪ್ರಕ್ರಿಯಾ ಸಂಹಿತೆಯ 44ನೆಯ ಕಲಮಿನ ಮೇರೆಗೆ ಯಾರಾದರೂ ವ್ಯಕ್ತಿ ದಂಡಾಧಿಕಾರಿಯ ಸಮ್ಮುಖದಲ್ಲಿಯೇ ಯಾವುದಾದರೂ ಅಪರಾಧ ವನ್ನೆಸಗಿದರೆ ಅಂಥ ವ್ಯಕ್ತಿಯನ್ನು ಸ್ವತಃ ಬಂಧಿಸಲು ಮತ್ತು ಸಂಹಿತೆಯಲ್ಲಿ ಹೇಳಿರುವ ರೀತಿ ಅವನ ಮೇಲೆ ಕ್ರಮ ಕೈಗೊಳ್ಳಲು ದಂಡಾಧಿಕಾರಿಗೆ ಅಧಿಕಾರ ಇದೆ. ಬಂಧನಕ್ಕೊಳಗಾದ ವ್ಯಕ್ತಿಯ ಬಿಡುಗಡೆ ಮಾಡಲೂ ದಂಡಾಧಿಕಾರಿಯೇ ಸೂಕ್ತ ಅಧಿಕಾರಿ. ಹೆಂಡತಿ ಮಕ್ಕಳ ಮತ್ತು ವೃದ್ಧ ಮಾತಾಪಿತೃಗಳ ಜೀವನಾಂಶದ ಬಗ್ಗೆ ಸೂಕ್ತ ಏರ್ಪಾಡು ಮಾಡಲು ದಂಡಾಧಿಕಾರಿಗೆ ಅಧಿಕಾರವಿದೆ. ಯಾವುದಾದರೂ ಮೊಕದ್ದಮೆಯ ಬಗ್ಗೆ ದಂಡಾಧಿಕಾರಿಗೆ ಯಾವುದೇ ಬಗೆಯ ವೈಯಕ್ತಿಕಹಿತಾಸಕ್ತಿ ಇದ್ದಲ್ಲಿ ಅವನು ಅಂಥ ಮೊಕದ್ದಮೆಯಲ್ಲಿ ತೀರ್ಮಾನ ಕೈಗೊಳ್ಳಕೂಡದೆಂದು ದಂಡಪಕ್ರಿಯಾ ಸಂಹಿತೆಯ 479ನೆಯ ಕಲಮಿನಲ್ಲಿ ಹೇಳಿದೆ. 

ಸಮಾಜದಲ್ಲಿ ಪುಂಡರ ಹಾವಳಿ ತಪ್ಪಿಸುವುದರಲ್ಲಿ, ಆಸ್ತಿಪಾಸ್ತಿಗಳ ಬಗ್ಗೆ ಜನರಿಗೆ ಸಂರಕ್ಷಣೆ ಒದಗಿಸುವುದರಲ್ಲಿ ಕಳ್ಳಕಾಕರಿಂದ ಅಪಾಯ ತಟ್ಟದಂತೆ ಮಾಡುವುದರಲ್ಲಿ, ಸಮಾಜವಿಧ್ವಂಸಕ ಕೃತ್ಯಗಳಿಂದ ನಾಗರಿಕರಿಗೆ ರಕ್ಷಣೆಯೊದಗಿಸುವುದರಲ್ಲಿ ದಂಡಾಧಿಕಾರಿಯ ಪಾತ್ರ ಹಿರಿದಾದ್ದು.									
	(ಎಸ್.ಎನ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ